ನಿಜಾಮುಲ್ ಮುಲ್ಕ್; ಇಸ್ಲಾಮಿ ಜಗತ್ತಿನ ಅಪೂರ್ವ ಆಡಳಿತಗಾರ
ನಮ್ಮ ಹಿಂದಿನ ಜನರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವುದರ ಒಂದು ಪ್ರಯೋಜನವೆಂದರೆ, ನಮ್ಮ
ಪೂರ್ವಜರು ಅವರ ಜೀವನದಿಂದ ಮತ್ತು ತ್ಯಾಗದಿಂದ ನಮಗೆ ಸ್ಪೂರ್ತಿ ನೀಡುತ್ತಾರೆ. ಈ ಸ್ಪೂರ್ತಿದಾಯಕ ಜನರಲ್ಲಿ
ಪ್ರವಾದಿಗಳು ಸಂತರು ವಿದ್ವಾಂಸರು ಮತ್ತು ನೀತಿವಂತ ರಾಜಕೀಯ ಆಡಳಿತಗಾರರು ಇದ್ದಾರೆ. ಇಸ್ಲಾಮಿನ
ಇತಿಹಾಸದಲ್ಲಿ ಅತ್ಯಂತ ನೀತಿವಂತ ರಾಜಕೀಯ ಆಡಳಿತಗಾರರಲ್ಲಿ ಒಬ್ಬರಾಗಿದ್ದರು ನಿಜಾಮುಲ್ ಮುಲ್ಕ್. ಅವರು
ಮಹಾನರಾದ ಇಮಾಮ್ ಗಝ್ಝಾಲೀ (ರ) ರಿಗೆ ಅಪಾರವಾದ ಗೌರವ ನೀಡಿದ್ದರು. ಆ ಕಾಲದಲ್ಲಿ ಮುಸ್ಲಿಂ ಜಗತ್ತಿನಲ್ಲಿ
ತುಂಬಾ ಗೊಂದಲವನ್ನು ಉಂಟುಮಾಡುವ ನೂತನವಾದಿಗಳು ಮತ್ತು ತತ್ವಜ್ಞಾನಿಗಳನ್ನು ಎದುರಿಸುವ
ಸಾಮರ್ಥ್ಯವನ್ನು ಇಮಾಮ್ ಗಝ್ಝಾಲೀ ಹೊಂದಿದ್ದಾರೆ ಎಂದು ಬಲವಾಗಿ ನಂಬಿದ್ದರು.
ನಿಜಾಮುಲ್ ಮುಲ್ಕ್ ಅವರನ್ನು ಅಲ್ ವಝೀರ್ ಅಲ್ ಕಬೀರ್ ಎಂದು ಕರೆಯಲಾಗುತ್ತದೆ. ಇದರ ಅರ್ಥ
ಮಹಾನ್ ಮಂತ್ರಿ ಎಂದಾಗಿದೆ. ಅವರ ಪೂರ್ಣ ಹೆಸರು ನಿಜಾಮುಲ್ ಮುಲ್ಕ್ ಕಿವಾಮು ಅದ್ ದೀನ್ ಅಬು ಅಲಿ ಅಲ್
ಹಸನ್ ಬಿನ್ ಅಲ್ಲಿ ಇದೀನಿ ಇಸಾಕ್ ಅತ್ತೂಸಿ. ಅವರು ಮೂಲತಃ ಇಮಾಮ್ ಅಲ್ ಗಝ್ಝಾಲೀ ರ ನಗರವಾದ ತೂಸ್
ನಿಂದ ಬಂದವರು. ನಿಜಾಮುಲ್ ಮುಲ್ಕ್ ಓರ್ವ ಅದ್ಭುತ ವ್ಯಕ್ತಿ ಮತ್ತು ಚಾಣಾಕ್ಷ ರಾಜಕೀಯ ನಾಯಕರಾಗಿದ್ದರು.
ಅವರು ತಮ್ಮ ಸ್ವಭಾವದಲ್ಲಿ ಶ್ರೇಷ್ಠರಾಗಿದ್ದರು. ಆಳವಾದ ಧಾರ್ಮಿಕ ಭಕ್ತಿ ಮತ್ತು ಅತ್ಯಂತ ನಮ್ರತೆ ಹೊಂದಿದ್ದರು.
ಅವರು ತಮ್ಮ ದರ್ಬಾರನ್ನು ಕುರಾನಿನ ಮಹಾನ್ ಪಠಣಕಾರರು ಮತ್ತು ತಮ್ಮ ಕಾಲದ ಉನ್ನತ ವಿದ್ವಾಂಸರಿಂದ
ತುಂಬಿಸಿದ್ದರು. ಅವರು ಬಗ್ದಾದಿನಲ್ಲಿ ನಿಝಾಮಿಯ್ಯ ಎಂಬ ಪ್ರಸಿದ್ಧ ಇಸ್ಲಾಮಿ ಉನ್ನತ ಶಿಕ್ಷಣ ಕೇಂದ್ರ ನಿರ್ಮಿಸಿದರು.
ಅವರು ಇಸ್ಲಾಮಿಕ ವಿಜ್ಞಾನ ಮತ್ತು ಕಲೆಗಳನ್ನು ಅಧ್ಯಯನ ಮಾಡಲು ಜನರನ್ನು ಬಲವಾಗಿ ಪ್ರೋತ್ಸಾಹಿಸಿದರು.
ಜ್ಞಾನವನ್ನು ತಪಸ್ಸಿನಲ್ಲಿ ಮುಳುಗುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಣವನ್ನು ನೀಡಿ ಪ್ರೋತ್ಸಾಹಿಸಿದರು.
ಅವರು ಸ್ವತಃ ಹದೀಸ್ ಅನ್ನು ಕಲಿತರು ಮತ್ತು ತಮ್ಮ ಕಾಲದ ಹದೀಸ್ ವಾಚನಕಾರರಾಗಿ ಪ್ರಸಿದ್ಧರಾಗಿದ್ದರು.
ನಿಜಾಮುಲ್ ಮುಲ್ಕ್ ಹಿಜ್ರಾ 408 ನಲ್ಲಿ ಜನಿಸಿದರು ಮತ್ತು 485 ನಲ್ಲಿ ನಿಧನರಾದರು. ಅವರ ತಂದೆ ದಹಕಿನ್ ಬೈಹಕ್
ಎಂಬವರು. ನಿಜಾಮುಲ್ ಮುಲ್ಕ್ ಅರಬಿಕ್ ವ್ಯಾಕರಣ, ಸಾಹಿತ್ಯ ಮತ್ತು ರಾಜಕೀಯಶಾಸ್ತ್ರವನ್ನು ಕಲಿಯುತ್ತಾ
ಬೆಳೆದರು.ಘಜ್ನಾದಲ್ಲಿ ಅತ್ಯಂತ ಚತುರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಂತರ ಸುಲ್ತಾನ್ ಲಿಲಾಬ್ ಅರ್ಸಲಾನ್
ಅವರ ವಜೀರ್ ಆದರು. ನಂತರ ಅವರು ಸುಲ್ತಾನನ ಮಗ ಮಲಿಕ್ ಶಾ ರವರ ವಜೀರ್ ಆಗಿ ಸೇವೆ
ಸಲ್ಲಿಸಿದರು.ನಿಜಾಮುಲ್ ಮುಲ್ಕ್ ನಿರ್ವಹಣಾ ವಿಷಯದಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದರು. ಮತ್ತು ಅವರ
ಸರ್ಕಾರದ ಅಡಿಯಲ್ಲಿ ಸಂಭವಿಸಿದ ತಪ್ಪುಗಳನ್ನು ಸರಿಪಡಿಸುವಲ್ಲಿ ಹೆಸರುವಾಸಿಯಾಗಿದ್ದರು. ಅವರು ರಾಜ್ಯದ
ನಾಗರಿಕರೊಂದಿಗೆ ಅತ್ಯಂತ ಸೌಮ್ಯರಾಗಿದ್ದರು. ಅನೇಕ ಮಹಾನ್ ವ್ಯಕ್ತಿಗಳು ಅವರನ್ನು ಹುಡುಕಿ ಬರುತ್ತಿದ್ದರು. 20
ವರ್ಷಗಳ ಕಾಲ ಈ ರೀತಿ ಜನರಸೇವೆಯನ್ನು ಮುಂದುವರಿಸಿದ್ದರು .
ನಿಜಾಮುಲ್ ಮುಲ್ಕ್ ಖವಾರಿಜ್ಮ್ ಮತ್ತು ಟುಸ್ನ ಮಶ್ಹ್ ದ್ ಕಟ್ಟಡಗಳನ್ನು ನವೀಕರಿಸಿದರು ಮತ್ತು ಆಸ್ಪತ್ರೆಗಳನ್ನು
ನಿರ್ಮಿಸಿದರು. ಆಸ್ಪತ್ರೆಗಾಗಿ 50,000 ಚಿನ್ನದ ದಿನಾರ್ ಗಳನ್ನು ದಾನ ಮಾಡಿದರು. ಮಾರ್ವ್, ಹರತ್, ಬಾಲ್ಖ್ ಬಸ್ರಾ
ಮತ್ತು ಇಸ್ಬಹಾನ್ ನಗರಗಳಲ್ಲಿ ಶಾಲೆಗಳನ್ನು ನಿರ್ಮಿಸಿದರು. ಅವರು ಅತ್ಯಂತ ಸಹನಾ ಶಾಲಿಯಾಗಿದ್ದರು. ಅತ್ಯಂತ
ಉದಾರ ಮತ್ತು ಅವರ ತಿಳುವಳಿಕೆಗೆ ಅನುಸಾರ ನೇರ ನಡೆ ಯವರಾಗಿರುತ್ತಿದ್ದರು. ಧೈರ್ಯಶಾಲಿ ವ್ಯಕ್ತಿಯಾಗಿದ್ದರು
ಹೆಚ್ಚು ಸಹನೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಿದರು. ಅವರ ಔದಾರ್ಯ ಅಪಾರವಾಗಿತ್ತು. ಪ್ರತಿದಿನ ಬೆಳಿಗ್ಗೆ ನೂರು
ಚಿನ್ನದ ದೀನಾರ್ ದಾನ ಮಾಡುತ್ತಿದ್ದರು ಎನ್ನಲಾಗಿದೆ.
ನಿಜಾಮುಲ್ ಮುಲ್ಕ್ 11 ವರ್ಷದಲ್ಲಿದ್ದಾಗ ಕುರ್ ಆನ್ ಕಂಠಪಾಠ ಮುಗಿಸಿದರು. ಮತ್ತು ಅವರು ಇಮಾಮ್ ಶಾಫಿ
ಮಝ್ಹಬಿನ ಕರ್ಮಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ತಮ್ಮ ಕರ್ಮಶಾಸ್ತ್ರದಲ್ಲಿ ಶಾಫಿ ಸರಣಿಯನ್ನು ಹಾಗೂ
ವಿಶ್ವಾಸ ಶಾಸ್ತ್ರದಲ್ಲಿ ಅಶ್ಅರಿ ವಿಧಾನವನ್ನು ಸ್ವೀಕರಿಸಿದ್ದರು. ಇಮಾಮ್ ಅಲ್ ಕುಶರಿ, ಅಬು ಮುಸ್ಲಿಂ ಬಿನ್
ಮಹ್ರ್ಬದ್ ಮತ್ತು ಅಬು ಹಮೀದ್ ಅಲ್ ಅಝ್ಹರಿ ಮುಂತಾದ ಅನೇಕ ವಿದ್ವಾಂಸರ ಅಧೀನದಲ್ಲಿ ಅಧ್ಯಯನ ನಡೆಸಿದರು.
ಜೊತೆಗೆ ನಿಜಾಮುಲ್ ಮುಲ್ಕ್ ಗಣಿತಶಾಸ್ತ್ರದಲ್ಲಿ ಪ್ರತಿಭಾವಂತರಾಗಿದ್ದರು. ಮತ್ತು ಅವರ ಬರವಣಿಗೆಯಲ್ಲಿ
ನಿಪುಣರಾಗಿದ್ದರು.
ನಿಜಾಮುಲ್ ಮುಲ್ಕ್ ಅವರು ವುಳೂ ಮಾಡಿದ ನಂತರ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ. ವುಳೂ ಮಾಡಿದರೆ ಎರಡು
ರಕ್ಅತ್ ನಮಾಜ್ ಮಾಡದೆ ಇರುತ್ತಿರಲಿಲ್ಲ . ಅವರು ಸೋಮವಾರ ಮತ್ತು ಗುರುವಾರ ಉಪವಾಸ ಹಿಡಿಯುತ್ತಿದ್ದರು.
ತಮ್ಮ ಸ್ವಭಾವದಲ್ಲಿ ಅಪಾರ ಒಳಿತುಗಳನ್ನು ಹೊಂದಿದ್ದರು. ಅವರು ನೀತಿವಂತರ, ಸಜ್ಜನರ ಸಹವಾಸದಲ್ಲಿರಲು ತೀವ್ರ
ಒಲವನ್ನು ಹೊಂದಿದ್ದರು. ಅಂತವರ ಸಲಹೆಗಳನ್ನು ಆಲಿಸಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು. ಕೆಲವೊಂದು
ಉಪದೇಶಗಳು ಅವರನ್ನು ಅಳುವಂತೆ ಮಾಡುತ್ತಿತ್ತು.
ನಿಜಾಮುಲ್ ಮುಲ್ಕ್ ಹಿಜ್ರಾ 485 ನಲ್ಲಿ ನಿಧನರಾದರು. ರಂಜಾನ್ ಉಪವಾಸದಲ್ಲಿದ್ದಾಗ ದಾರುಣವಾಗಿ
ಹತ್ಯೆಗೀಡಾದರು. ಸುಸ್ ಒಬ್ಬ ನಿಗೂಢ ಕೊಲೆಗಡುಕ ಭಕ್ತನ ರೂಪದಲ್ಲಿ ಬಂದು ನಿಜಾಮುಲ್ ಮುಲ್ಕ್ ಅವರಿಗೆ
ಉಡುಗೊರೆಯೊಂದನ್ನು ಹಸ್ತಾಂತರಿಸುವಂತೆ ನಟಿಸಿದನು. ನಿಜಾಮುಲ್ ಮುಲ್ಕ್ ಅವನಿಂದ
ಉಡುಗೊರೆಯನ್ನು ತೆಗೆದುಕೊಳ್ಳಲು ಮುಂದಾದಾಗ ಆ ವ್ಯಕ್ತಿ ಮಹಾನರನ್ನು ಚಾಕುವಿನಿಂದ ಇರಿದು ಕೊಂದು ಬಿಟ್ಟನು.
ತಕ್ಷಣ ಜಾಗೃತರಾದ ಸೈನಿಕರು ಹಂತಕನನ್ನು ಕೂಡ ಕೊಂದರು. .ನಿಜಾಮುಲ್ ಮುಲ್ಕ್ ಅವರನ್ನು ರಾಜ್ಯಪಾಲನ
ಆದೇಶ ಮೇರೆಗೆ ಸರ್ಕಾರದ ಒಳಗಿನ ಸಂಚಿನಿಂದಲೇ ಹತ್ಯೆ ಮಾಡಲಾಗಿದೆ ಎಂದು ನಂಬಲಾಗಿದೆ. .ನಿಜಾಮುಲ್
ಮುಲ್ಕ್ ಹತ್ಯೆಯ ನಂತರ ಪ್ರಸ್ತುತ ರಾಜ್ಯಪಾಲನ ಕೆಲವು ತಿಂಗಳುಗಳ ಕಾಲ ಬದುಕಿದ್ದು. ನಿಜಾಮುಲ್ ಮುಲ್ಕ್ ತಮ್ಮ
ಕೊನೆಯ ನಿಮಿಷಗಳಲ್ಲಿ “ನನ್ನನ್ನು ಕೊಂದ ಕೊಲೆಗಡುಕನನ್ನು ದಯಮಾಡಿ ಕೊಲ್ಲಬೇಡಿ. ನಾನು ಆತನಿಗೆ
ಕ್ಷಮಿಸಿದ್ದೇನೆ. ಲಾ ಇಲಾಹ ಇಲ್ಲಲ್ಲಾಹ್ ” ಎಂಬ ಮಾತುಗಳನ್ನು ಉಸುರಿ ಅಲ್ಲಾಹನೆಡೆಗೆ ಸೇರಿದರು.
ಮುಹಮ್ಮದ್ ಅರಾಝ್
(ಅಲ್ ಇಹ್ಸಾನ್ ದಅವಾ ಕಾಲೇಜು, ಮೂಳೂರು)