ಬಸ್ಮಲ; ಖುರಾನಿನ ಖಜಾನೆಗಳ ಕೀಲಿಕೈ
ಪವಿತ್ರವಾದ ಖುರ್’ಆನಿನ ಬಾಷಾ ಸಾಹಿತ್ಯ ಸೌಂದರ್ಯದ ಆಳ ಸಮುದ್ರಕ್ಕಿಳಿದಾಗ ಅದರ
ಸೌಂದರ್ಯದ ಅವಿಸ್ಮಯ ಲೋಕವೇ ದರ್ಶನವಾಗುತ್ತದೆ. ಪವಿತ್ರವಾದ ಖುರ್’ಆನ್
ಜಗದೊಡೆಯನಾದ ಅಲ್ಲಾಹನ ದಿವ್ಯ ವಚನಗಳಾಗಿದ್ದು, ಅದನ್ನು ಸೃಷ್ಟಿಗಳಾದ ಮಾನವರು
ಅರ್ಥೈಸುವುದು ಕಷ್ಟಕರವಾಗಿದ್ದರೂ ಒಂದು ಹಂತದವರೆಗೆ ಆ ದೈವಿಕ ಗ್ರಂಥವನ್ನು ವಿಶ್ಲೇಷಿಸಲು
ಕೆಲವು ನಿಪುಣ ವಿದ್ವಾಂಸರಿಗೆ ಸಾಧ್ಯವಾಗಿದೆ.
ಖುರಾನಿನ ಮೊದಲ ಸೂಕ್ತವಾದ ಬಿಸ್ಮಿಗೆ ಹಲವಾರು ಶ್ರೇಷ್ಠತೆಗಳಿವೆ. ಬಿಸ್ಮಿಯನ್ನು ಉಚ್ಚರಿಸಿ
ಅಲ್ಲಾಹನ ನಾಮ ಸ್ಮರಣೆ ಮಾಡದೆ ಮಾಂಸ ಕೊಯ್ಯುವುದು ಕೂಡ ನಿಷಿದ್ಧವೆಂದು ಇಸ್ಲಾಂ
ಕಲಿಸುತ್ತದೆ. ಪ್ರವಾದಿ (ಸ.ಅ) ರವರು ಹೇಳುತ್ತಾರೆ “ಅಲ್ಲಾಹನದಿಂದ ಅವತೀರ್ಣವಾದ ಎಲ್ಲಾ
ಗ್ರಂಥಗಳಲ್ಲಿನ ಜ್ಞಾನಗಳನ್ನು ಖುರ್’ಆನ್ ಒಳಗೊಂಡಿದೆ, ಅದರಂತೆಯೇ ಖುರ್’ಆನ್ ಪ್ರತಿಪಾದಿಸಿದ
ಸಕಲ ವಿಚಾರಧಾರೆಗಳನ್ನು ಸೂರತ್ ಫಾತಿಹಾ ಒಳಗೊಂಡಿದ್ದು, ಫಾತಿಹಾದಲ್ಲಿರುವ
ವಿಚಾರಗಳೆಲ್ಲವೂ ಬಿಸ್ಮಿಯಲ್ಲಿ ಪೋಣಿಸಲಾಗಿದೆ. ಖುರ್’ಆನ್ ಅವತೀರ್ಣದ ಆರಂಭವೇ
ಸೃಷ್ಟಿಕರ್ತನಾದ ಅಲ್ಲಾಹನ ನಾಮದಿಂದ ನೀನು ಪಠಿಸು ಎಂಬುದಾಗಿದೆ. ಅಲ್ಲಾಹನ ನಾಮ
ಸ್ಮರಣೆಯಿಂದ ಪ್ರಾರಂಭಿಸುವ ಯಾವೊಂದು ಕಾರ್ಯಗಳು ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ
ಸಂಪೂರ್ಣ ಅರ್ಪಣಾ ಮನೋಭಾವವನ್ನು ಸೂಚಿಸುತ್ತದೆ. ಪ್ರಥಮ ಸೂಕ್ತವಾದ ಬಿಸ್ಮಿಯು 19
ಅಕ್ಷರಗಳನ್ನು ಒಳಗೊಂಡಿದ್ದು ಪ್ರಸ್ತುತ ಸೂಕ್ತ ಕಬರಿನಲ್ಲಿ ಶಿಕ್ಷಿಸಲಿಕ್ಕಾಗಿ ನೇಮಕಗೊಂಡ
ಪ್ರಮುಖರಾದ 19 ಮಲಕುಝ್ಝಬಾನಿಯಾಗಳಿಂದ ರಕ್ಷಣೆ ಹೊಂದಲು ರಹದಾರಿಯೆಂಬುವುದು
ವಿದ್ವಾಂಸರಿಂದ ಉಲ್ಲೇಖಿತವಾಗಿದೆ. ಈ 19 ಅಕ್ಷರಗಳಿಗೂ ಒಂದೊಂದು ವಿಶೇಷ ಅರ್ಥಗಳು ಅಗಾಧ
ಆಳ ವಿವರಣೆಗಳೂ ವಿದ್ವಾಂಸರಿಂದ ದಾಖಲಿಸಲ್ಪಟ್ಟಿವೆ.
ಭೂಮಿಯಲ್ಲಿನ ವೃಕ್ಷಗಳು ಲೇಖನಿಯಾಗಿಯೂ ಸಮುದ್ರದ ನೀರನ್ನು ಶಾಯಿಯಾಗಿಯೂ ಬಳಸಿ
ಮನುಷ್ಯ ಜಿನ್ನ್ ವರ್ಗಗಳು ಒಂದುಗೂಡಿ ಶ್ರಮಿಸಿದರೂ ಕೂಡ ಬಿಸ್ಮಿಯ ಮಹತ್ವವನ್ನು ಬರೆದು ಪೂರ್ತಿ
ಮಾಡಲು ಸಾಧ್ಯವಿಲ್ಲ . ಮನುಷ್ಯ ಜೀವನವು ಕಷ್ಟ ಸುಖಗಳ ಸಂಗಮ ವ್ಯವಸ್ಥೆಯಾಗಿದ್ದು ಮಾನವ
ತನ್ನ ಜೀವನ ಜಂಜಾಟಗಲಿಂದ ಜಿಗುಪ್ಸೆಗೊಳಗಾಗುವಾಗ, ಖಿನ್ನತೆ ಅನುಭವಿಸುವಾಗ ಮಾನಸಿಕ
ಪರಿಹಾರ ಗಳಿಗಾಗಿ ಮೊರೆ ಹೋಗುವುದು ಸರ್ವಸಾಧಾರಣವಾಗಿದೆ. ಸರ್ವಾಧಿಪತಿಯಾದ ಅಲ್ಲಾಹನ
ಭೂಮಿ ಲೋಕದಲ್ಲಿ ವಿವಿಧ ಯಾತನೆಗಳನ್ನು ಅನುಭವಿಸುವವರು ಇರಬಹುದು. ಅವರೆಲ್ಲರಿಗೂ ತಮ್ಮ
ತಮ್ಮ ಅಹವಾಲುಗಳನ್ನು ಕರೆದು ಹೇಳಲು ಸಾಧ್ಯವಾಗುವ ರೀತಿಯಲ್ಲಿ ಬಿಸ್ಮಿಯ ವಾಕ್ಯವನ್ನು ಅಲ್ಲಾಹು
ನೀಡಿದ್ದಾನೆ.
ಅಲ್ಲಾಹ್ ಎಂಬುದು ಅಲ್ಲಾಹನ ಗುಣ ವಿಶೇಷಣವಲ್ಲದ ಏಕೈಕ ಸರ್ವನಾಮವಾಗಿದ್ದು ಅಲ್ಲಾಹನು
ಸುಮಾರು 99 ನಾಮಗಳ ಸಾಲಿನಲ್ಲಿ ಅತ್ಯುನ್ನತ ನಾಮವಾಗಿದೆ.ರಹ್ಮಾನ್ , ರಹೀಮ್’ಗಳೆಂಬ
ಪದಪ್ರಯೋಗಗಳೊಂದಿಗಿನ ಸೃಷ್ಟಿಕರ್ತನ ನಾಮಸ್ಮರಣೆಯ ಪ್ರಾರಂಭವೇ ನೊಂದ ಮನಗಳಿಗೆ
ಬಹುದೊಡ್ಡ ಆಶ್ವಾಸನೆಯ ಕವಾಟಗಳನ್ನು ತೆರೆದು ಕೊಡುತ್ತಿದೆ. ದಾಸರ ಎಲ್ಲಾ ಸಂಕಷ್ಟಗಳನ್ನು
ಅರಿಯುವ ಯಜಮಾನನಾದ ಅಲ್ಲಾಹು ದಯಾಳುವೂ, ಕರುಣಾಮಯಿಯೂ ಆಗಿದ್ದಾನೆ ಎಂಬುದನ್ನು
ವಚನಗಳು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ಅಲ್ಲಾಹನ ಬೇರೆ ಎಲ್ಲಾ ನಾಮ ವಿಶೇಷಣಗಳಿಗಿಂತಲೂ
ಇಲ್ಲಿ ರಹ್ಮಾನ್, ರಹೀಮ್’ಗಳೆಂಬ ಪದ ಬಳಕೆಯು ದಾಸರ ಪರಿಸ್ಥಿತಿಗಾನುಸಾರ ಹೆಚ್ಚು ಸೂಕ್ತವಾಗಿ
ಹೊಂದಾಣಿಕೆಯಾಗುತ್ತದೆ.
ರಹ್ಮಾನ್ ಎಂಬುದರ ಮೂಲಧಾತುವಾದ “ರಹ್ಮತ್” ಎಂಬ ಪದವು ಗರ್ಭ ಎಂದು ಅರ್ಥಬರುವ
“ರಹಮ್” ಎಂಬ ಪದದಿಂದ ಉತ್ಪತ್ತಿಯಾಗಿದೆ. ಒರ್ವ ಮನುಷ್ಯನ ಪಾಲಿಗೆ ಆತನಿಗೆ ಲಭಿಸಿದ
ಕಾರುಣ್ಯಗಳ, ಮಮತೆಗಳ ಸಾಲಿನಲ್ಲಿ ಅತ್ಯಂತ ನಿಷ್ಕಲ್ಮಶ ವಾತ್ಸಲ್ಯ ಲಭಿಸಿದ್ದು ತಾಯಿಯ ಉದರ
ಕಾಲದಲ್ಲಾಗಿದೆ. ಕಾರಣ ತಾಯಿಯು ತನ್ನ ಗರ್ಭಸ್ಥ ಮಗುವಿಗೆ ನೀಡುವ ಮಮತೆ, ವಾತ್ಸಲ್ಯವು
ನಿರ್ಲೋಭವಾದ, ಏಕಮುಕ್ತ ಕರುಣೆಯಾಗಿದೆ. ಅಲ್ಲಿ ಯಾವುದೇ ಸ್ವಾರ್ಥಗಳಿಗೂ ಅವಕಾಶಗಳಿಲ್ಲ.
ಇದರ ತದ್ರೂಪಿ ಕರುಣೆಯನ್ನಾಗಿದೆ ಓರ್ವ ದಾಸನಿಗೆ ಸೃಷ್ಟಿಕರ್ತನಾದ ಅಲ್ಲಾಹನು ನೀಡುತ್ತಿರುವುದು
ಎಂಬ ವಾಸ್ತವಿಕತೆಯೆಡೆಗಿರುವ ಸೂಚನೆಯಾಗಿದೆ “ರಹ್ಮಾನ್” ಪದ ಬಳಕೆ.
ರಹ್ಮಾನ್ ಎಂಬ ಪದವನ್ನು ಭಾಷಾ ಶಾಸ್ತ್ರೀಯ ವಿಶ್ಲೇಷಣೆಯೊಂದಿಗೆ ಶೋಧಿಸಿ ನೋಡುವುದಾದರೆ
ಅರಬಿ ಭಾಷಾ ಶಾಸ್ತ್ರದ ಪ್ರಕಾರ ರಹ್ಮಾನ್ ರೀತಿಯ ಪದಗಳು فعلان ಎಂಬ ಮಾದರಿ ಪದದ
ರೂಪದಲ್ಲಿದೆ. ಪ್ರಸ್ತುತ ಮಾದರಿ ಪದವು ಹಲವು ವಿಶೇಷಾರ್ಥಗಳನ್ನು ಒಳಗೊಂಡಿದ್ದು ಪ್ರಥಮವಾಗಿ
فعلان ಎಂಬುದು ಹೆಚ್ಚಳವನ್ನು ಸೂಚಿಸುತ್ತದೆ. ಅಂದರೆ ಅಲ್ಲಾಹು ಭರಪೂರವಾದ ಕಾರುಣ್ಯ
ವರ್ಷಿಸುವವನು ಎಂದು ಅರ್ಥೈಸಬಹುದು. ಎರಡನೆಯದಾಗಿ ಆ ಕಾರುಣ್ಯವು ಪ್ರಸ್ತುತ ಸಮಯ
ಸಂದರ್ಭದಲ್ಲಿ ಲಭಿಸುತ್ತಿರುವುದಾಗಿದ್ದು ಭವಿಷ್ಯತ್ತಿನಲ್ಲಿ ಮುರಿದು ಹೋಗುವ ಸಾಧೈತೆಯೆಡೆಗೆ ಬೊಟ್ಟು
ಮಾಡುತ್ತದೆ. ಅದೇ ರೀತಿ فعيل ಮಾದರಿ ಪದದಿಂದ ಉದ್ಭವ ಗೊಂಡ ರಹೀಮ್ ಎಂಬ ಪದವು مبالغة
ಅಥವಾ ಕಾರುಣ್ಯದ ಹೆಚ್ಚಳವನ್ನು ಸೂಚಿಸುವುದರೊಂದಿಗೆ ನಿರಂತರವಾದ ಕರುಣಾ ಕಟಾಕ್ಷಗಳನ್ನು
ತೆರೆದು ನೀಡುವವನು ಎಂಬ ಒಳಾರ್ಥವನ್ನು ಪ್ರತಿಪಾದಿಸುತ್ತದೆ. ಆ ನಿಟ್ಟಿನಲ್ಲಿ ನೋಡುವಾಗ
ಮನುಷ್ಯನು ತನ್ನ ವರ್ತಮಾನ ಕಾಲದ ಸಮಸ್ಯೆಗಳು ಹಾಗೂ ಅದರ ಪರಿಹಾರಕ್ಕಾಗಿ
ಹಾತೊರೆಯುವವನು ಆಗಿದ್ದು ಅವುಗಳು ಸುಗಮ ದಾರಿ ಹಿಡಿದ ನಂತರದಲ್ಲಿ ತನ್ನ ಭವಿಷ್ಯತ್ತಿನ ಕಡೆಗೆ
ದೃಷ್ಟಿ ಹೊರಳಿಸುವವನು ಆಗಿದ್ದಾನೆ. ಆದ್ದರಿಂದ ಅಲ್ಲಾಹು ಮನುಷ್ಯನೊಂದಿಗೆ ನಿನ್ನ ವರ್ತಮಾನ
ಹಾಗೂ ಭವಿಷ್ಯದ ಸಕಲ ಅಗತ್ಯಗಳನ್ನು ನಾನು ಪೂರೈಸುತ್ತೇನೆ ಎಂಬ ಧ್ವನಿ ಬರುವ ರೀತಿಯಲ್ಲಿ
ರಹ್ಮಾನ್ ಮತ್ತು ರಹೀಮ್ ಎಂಬ ಪದಗಳ ಬಳಕೆಯನ್ನು ಮಾಡಿದ್ದಾನೆ.ಈ ದೃಷ್ಟಿಕೋನದಲ್ಲಿ
ಅಳೆಯುವಾಗ ರಹಮಾನ್ ರಹೀಮ’ಗಳೆಂಬ ಪದ ಪ್ರಯೋಗವು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ
ಸೂಕ್ತವಾಗಿ ಹೊಂದಾಣಿಕೆಯಾಗುತ್ತಿದೆ ಎಂಬುದು ಅರಿತುಕೊಳ್ಳಬಹುದು.ಈ ರೀತಿಯಾಗಿ ಪವಿತ್ರ
ಖುರ್’ಆನ್ ತನ್ನ ಪ್ರಾರಂಭದ ಸೂಕ್ತದಲ್ಲೇ ಹಲವು ಸೂಕ್ಷಾತಿಸೂಕ್ಷ್ಮ ರಹಸ್ಯಗಳನ್ನು ತನ್ನ ಒಡಲಲ್ಲಿ
ಅಡಗಿಸಿಟ್ಟಿದೆ.
ಅಬ್ದುಲ್ ಖಾದರ್ ಸಿನಾನ್
(ಅಲ್ ಇಹ್ಸಾನ್ ದಅವಾ ಕಾಲೇಜು, ಮೂಳೂರು)