ಮಹ್ಶರಾದಲ್ಲಿ ಪುಣ್ಯರಸೂಲರೇ ಆಶ್ರಯ

ಆಲಾ ಹಝ್ರತ್ (ರ) ರವರ ಸಹೋದರ ಮೌಲಾನಾ ಹಸನ್ ರಝಾ ಖಾನ್ (ರ) ಬರೆದ ಕಾವ್ಯ. ಮಹ್ ಶರಾದ ಕಠಿಣ ಸಂದರ್ಭಗಳಲ್ಲಿ ನೆಬಿ ಸಲ್ಲಲಾಹು ಅಲೈಹಿವಸಲ್ಲಮರ ಕಾರ್ಯಶೈಲಿ ಹೇಗಿರಬಹುದೆಂಬುದರ ಸೊಗಸಾದ ಚಿತ್ರಣವನ್ನು ನೀಡಿದ್ದಾರೆ.

ವಿಪತ್ತುಗಳು ಎರಗುವಾಗ ತಮ್ಮ ನಾಮವು ನೆರವಿಗೆ ಬರಬಹುದು
ನಮ್ಮ ಕಾರ್ಯ ಕೆಲಸಗಳೆಲ್ಲ ಸುಲಭವಾಗಿ ಸಾಧ್ಯವಾಗಬಹುದು

ಪರಲೋಕದಿ ಅಪರಾಧಿಯು ಎಡರುವಾಗೆಲ್ಲ ತಮ್ಮ ನಾಮೋಚ್ಚಾರಣೆ ಮಾಡುವನು
ಖಂಡಿತ ಅಲ್ಲಾಹನ ಕರುಣೆ ಅನುಕಂಪ ಸಿಗಬಹುದು

ಮಹ್ ಶರಾದಲಿ ತೋರಿಸಿಕೊಡಲಾಗುವುದು ಮೆಹಬೂಬರ ಘನತೆಯನ್ನು
ಪುಣ್ಯರ ಮಾತು ಅನಿಸಿಕೆಗಳಲ್ಲೇ ಅಲ್ಲಾಹನ ಖುಷಿ ಇರುವ ದಿನವಂದು

ಕೈದಿಗಳ ಕಾಲಿನ ಸಂಕೋಲೆಯನು ಬಿಡಿಸುತ್ತಿರುವ ಪುಣ್ಯರು
ಚಿಂತಾಧೀನರ್ಯಾರೋ ಅವರನು ಕರೆಯುತ್ತಿರುವರು

ಕರ್ಮಗಳ ಅಳೆಯುವ ಸಮಯ ದಾಸರ ತಕ್ಕಡಿಯ ಸಮೀಪವಿರುವರು
ಕೆಲವರು ನಿರೀಕ್ಷೆಯ ಕಣ್ಗಳೊಂದಿಗೆ ಪುಣ್ಯರ ಮುಖ ನೋಡುತಿರುವರು

ಅಯ್ಯೋ… ಯಾ ರಸೂಲಲ್ಲಾಹ್ … ಎಂದು ಕೆಲವರ ಹಾಹಾಕಾರ
ಕೆಲವರು ಪುಣ್ಯರ ಸೆರಗನ್ನು ಹಿಡಿದು ಕುಣಿಯುವರು

ದಯವಿಟ್ಟು ನನ್ನ ದುಸ್ಥಿತಿ ಪುಣ್ಯರಿಗೆ ತಿಳಿಸಿ ಎಂದು
ಜನ ಪರಸ್ಪರ ಹೇಳುತಾ ಇರುವರು

ಕೌಸರ್ ಬಳಿ ಕೆಲವರು ನಾಲಗೆಯನು ಚಾಚುತಾ
ಪುಣ್ಯರ ಪವಿತ್ರ ಪಾದಗಳಿಗೆ ಮುಗಿ ಬೀಳುವರು

ಸಾವಿರಾತ್ಮಗಳು ತಮಗರ್ಪಿತ! ಕೈದಿಗಳ ಗೋಳು ಕೇಳಿ
ಮೃದುವಾದ ಪಾದಗಳ ಸವೆದು ಪುಣ್ಯರು ದೌಡಾಯಿಸುತಿರುವರು

ನಾಪತ್ತೆಯಾದ ತನ್ನ ಮುದ್ದು ಮಗುವನ್ನು ತಾಯಿ ಹೇಗೆ ತಲಾಶೆ ಮಾಡುವಳೋ
ಅಲ್ಲಾಹನಾಣೆ!
ಹಾಗೆಯೇ ಪುಣ್ಯರು ದಾಸರ ಹುಡುಕಾಟದಲ್ಲಿ ಮುಳುಗಿರುವರು

ಇತರೆಲ್ಲ ನೆಬಿಯರು \” ಬೇರೆಯವರ ಬಳಿ ಹೋಗಿ \” ಎಂದೆನ್ನುವರು
ಪುಣ್ಯರು \” ನಾನೇ ನಿಭಾಯಿಸುವೆನು\” ಎಂಬ ನಿರೀಕ್ಷೆಯ ಮಾತುಗಳನ್ನಾಡುವರು

ಪಾಪಿಗಳ ಮುಕ್ತಿಗಾಗಿ ತುಟಿಗಳಲ್ಲಿ ಪ್ರಾರ್ಥನೆಯೇ ತುಂಬಿರುವುದು
ಖುದಾನ ಮುಂದೆ ಶಿರಬಾಗಿಸಿ ಸಾಷ್ಠಾಂಗದಲ್ಲಿ ತಲ್ಲೀನರಾಗುವರು

ದೀನ ದಾಸರು ಪುಣ್ಯರ ನೆರವಿನೊಂದಿಗೆ ಸಮಾಧಾನ ಹೊಂದಿರುವರು
ಹುಝೂರರ ಶತ್ರುಗಳು ಮಹಾ ಆಪತ್ತಿನಲ್ಲಿ ಸಿಲುಕಿರುವರು

ಅಲ್ಲಾಹನ ಅಪಾರ ಅನುಗ್ರಹದಿಂದ ನಾನು ಪವಿತ್ರ ದರ್ಬಾರಿನ ಭಿಕ್ಷುಕನಾಗಿರುವೆ
ಖಂಡಿತ, ಫಕೀರ ಹಸನ್ ಗಾಗಿ ಸ್ವರ್ಗದಿ ಸೀಟು ಮೀಸಲಿಡುವರು

Leave a Comment

Your email address will not be published. Required fields are marked *

Scroll to Top