ಶಿಕ್ಷಣ ಪದ್ಧತಿಯ ಇಸ್ಲಾಮಿಕ್ ಮಾದರಿ

ಶಿಕ್ಷಣ ಪದ್ಧತಿಯ ಇಸ್ಲಾಮಿಕ್ ಮಾದರಿ

ಜಗತ್ತಿನಲ್ಲಿ ಹಲವು ತರದ ಜ್ಞಾನ ಪರಂಪರೆಗಳಿವೆ. ಇಂದು ಲೋಕದ ಮೂಲೆ ಮೂಲೆಗೂ ವ್ಯಾಪಿಸಿ ಪ್ರಾಬಲ್ಯ ಹೊಂದಿದ ಪಾಶ್ಚಾತ್ಯ ಜ್ಞಾನ ಪರಂಪರೆಯಾಗಲಿ, ನಿಸರ್ಗದೊಂದಿಗಿನ ನಿರಂತರ ಸಂಪರ್ಕದಿಂದ ಋಷಿಗಳಿಗೆ ದಿವ್ಯಜ್ಞಾನ ಲಭ್ಯವಾಯಿತೆಂದೂ ಕಾಲಕಾಲಕ್ಕೆ ಬದಲಾಗಿ ನಿರಂತರ ಅನ್ವೇಷಣೆಯಿಂದ ಬಂತೆನ್ನುವ ಭಾರತೀಯ ಪರಂಪರೆಯಾಗಲಿ ಎಲ್ಲವೂ ಜಿಜ್ಞಾಸಿಗಳ ಕುತೂಹಲ ಕೆರಳಿಸುವಂತದ್ದು. ಶಾಲೆಗಳಲ್ಲಿ ಮಕ್ಕಳಿಗೆ ಪ್ರಪಂಚ, ಪ್ರಕೃತಿ, ಸಮಾಜ ಮುಂತಾಗಿ ವಿವಿಧ ವಿಷಯಗಳ ಮೇಲೆ ಬೋಧಿಸಲಾಗುತ್ತಿದೆ. ಆದರೆ ಅವೆಲ್ಲ ಓರ್ವ ಸಮರ್ಪಕ ಮಾನವನನ್ನು ಬೆಳೆಸುವಲ್ಲಿ ವಿಫಲವಾಗುತ್ತಿದೆಯೆಂಬುದು ನಮ್ಮನ್ನು ತೀವ್ರ ಆತಂಕಕ್ಕೆ ಒಡ್ಡುತ್ತಿದೆ. ವಿಜ್ಞಾನ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿದವರು ಸಹಜೀವಿಯನ್ನು ಅರ್ಥ ಮಾಡುವಲ್ಲಿ ಸೋಲುವುದು ವಿಪರ್ಯಾಸವೇ ಸರಿ. ನಾಗರಿಕತೆಯ ಪಥಚಲನೆ ಭೌತಿಕವಾಗಿ ನಾಗಾಲೋಟದಲ್ಲಿರುವಾಗ ಮೂಲಭೂತವಾಗಿ ಮನುಷ್ಯರಿಗಿರಬೇಕಾದ ಏನೋ ಕೆಲವು ಸಂಗತಿಗಳ ಕೊರತೆ ಕಾಡುತ್ತಿದೆಯೆಂಬುದುರಲ್ಲಿ ಸಂದೇಹವಿಲ್ಲ.

ಈ ನಿಟ್ಟಿನಲ್ಲಿ ಇಸ್ಲಾಮೀ ಜ್ಞಾನ ಪರಂಪರೆಯನ್ನೊಮ್ಮೆ ಅವಲೋಕಿಸೋಣ. ಇದು ದೇವಕೇಂದ್ರಿತವಾದದ್ದೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದರ ಮೂಲವಿರುವುದು ಕೂಡ ಅಲ್ಲಾಹನಲ್ಲಿಯೇ. ಅಲ್ಲಿಂದ ಹರಿದು ಬರುವ ಅರಿವಿನ ಸುಧೆಯನ್ನು ಭೂಮಿಯಲ್ಲಿ ಹರಡಬೇಕಾದ್ದು ಪವಿತ್ರ ಪ್ರವಾದಿಗಳು. ಅವರ ಶುಭ್ರವಾದ ಪಕ್ವವಾದ ಹೃದಯವು ಅಲ್ಲಾಹನ ದೂತರ ಮೂಲಕ ಜ್ಞಾನ ಸಂಪಾದಿಸುತ್ತದೆ. ಅಲ್ಲೊಂದು ಜ್ಯೋತಿ ಬೆಳಗುತ್ತದೆ. ಆ ಜ್ಯೋತಿಯಿಂದ ಸುತ್ತಲಿರುವವರು ಬೆಳಕನ್ನು ಹೀರುತ್ತಾರೆ. ಶುಭ್ರರಾಗುತ್ತಾರೆ. ಕಾರ್ಗತ್ತಲೆಯಿಂದ ಹೊರಬರುತ್ತಾರೆ.

ಹಾಗೆಯೇ ತಲೆತಲಾಂತರದಿಂದ ಹೃದಯದಿಂದ ಹೃದಯಕ್ಕೆ ಜ್ಞಾನ ಬಿತ್ತರಣೆ ಜರುಗುತ್ತದೆ. ಪ್ರಮುಖ ವೈಶಿಷ್ಠೈವೇನೆಂದರೆ, ಪ್ರಸ್ತುತ ವಿಧಾನವು ಕೇವಲ ಜ್ಞಾನ ಪ್ರಸಾರವನ್ನು ಮಾತ್ರ ಹೊಂದಿಲ್ಲ. ಹೊರತು ಎರೆದು ಕೊಡುವ ಬೋಧನೆಯನ್ನು ಬದುಕಿನಲ್ಲಿ ಸಾಕಾರಗೊಳಿಸುವ ಪ್ರಕ್ರಿಯೆಯನ್ನೂ ಒಳಗೊಂಡಿದೆ. ಅಂದರೆ, ಇಸ್ಲಾಮೀ ವಿದ್ಯಾರ್ಥಿ ಜ್ಞಾನವನ್ನು ಮಿದುಳಿನಲ್ಲಿ ಮಾತ್ರ ತುಂಬಿಸಿಡದೆ ಬದುಕಿನ ವಾಸ್ತವಕ್ಕೆ ಇಳಿಸುತ್ತಾನೆ. ಇದು ಬಹಳ ಸಹಜವೆಂಬಂತೆ ನಡೆಯುತ್ತದೆ. ಆದುದರಿಂದಲೇ, ಇಲ್ಲಿ ಗುರುಶಿಷ್ಯರ ಸಂಬಂಧ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಗುರುವಿಗೆ ಗೌರವ, ಅನುಸರಣೆ, ಶರಣಾಗತಿ ಮುಂತಾದವುಗಳನ್ನು ಸಮರ್ಪಕವಾಗಿ ಸಲ್ಲಿಸಬೇಕು. ಹೆಚ್ಚುವರಿಯಾಗಿ ಅಥವಾ ಐಚ್ಛಿಕವಾಗಿ ಮಾಡಬೇಕಾದ ಸಂಗತಿಯಲ್ಲ ಇದು. ಬದಲಾಗಿ, ಜ್ಞಾನ ಸಂಪಾದನೆ ಮಾಡುವ ಹಂಬಲವಿದ್ದಲ್ಲಿ ಕಡ್ಡಾಯವಾಗಿ ಮಾಡಿರಲೇಬೇಕು. ಒಟ್ಟಿನಲ್ಲಿ ಗೌರವ ಶರಣಾಗತಿಯ ಮನೋಭಾವವಿರಬೇಕು. ಪ್ರಸ್ತುತ ಕಲಿಕಾ ವಿಧಾನದಲ್ಲಿ ಟೀಕೆ ವಿಮರ್ಶೆಗಳು ನಿಷೇಧಿತವಲ್ಲ. ಆದರೆ ಅವೆಲ್ಲ ಸಮಂಜಸ ರೀತಿಯಲ್ಲೇ ಮಾಡಬೇಕೆಂದು ಮಾತ್ರ. ಅಲ್ಲದಿದ್ದಲ್ಲಿ, ಜ್ಞಾನ ಪಡೆಯಲಾಗದೆಂದು ಮಾತ್ರವಲ್ಲ ಬದುಕಿನಲ್ಲಿ ದೊಡ್ಡ ಅನಾಹುತಗಳೇ ಕಾದಿರುವ ಸಾಧ್ಯತೆಯಿದೆ. ಅಂಥ ಹಲವಾರು ಉದಾಹರಣೆಗಳಿವೆ ಕೂಡ. ಮಹಾಜ್ಞಾನಿಗಳಾಗಿ ಮೆರೆದು ಕಡೆಗೆ ಗುರುವರ್ಯರೊಂದಿಗಿನ ನಂಟಿನಲ್ಲಿ ಸಣ್ಣ ಬಿರುಕುಂಟಾಗಿ ನಾಶಹೊಂದಿದವರಿದ್ದಾರೆ. ಗುರುವು ಶಿಷ್ಯರಿಗಿಂತ ಉತ್ತಮರೋ ಯಾ ಹೆಚ್ಚು ತಿಳುವಳಿಕೆಯುಳ್ಳವರಾಗಬೇಕೆಂದಿಲ್ಲ. ಆದರೆ ಗುರುವೆಂಬ ನೆಲೆಯಲ್ಲಿ ಅವರಿಗೆ ಹೆಚ್ಚಿನ ಸ್ಥಾನವಿರುತ್ತದೆ. ಅದನ್ನು ಮಾನ್ಯ ಮಾಡಬೇಕು. ಅಲ್ಲದೆ, ಅವರ ನೋವು ನಲಿವುಗಲ್ಲಿ ಭಾಗಿಯಾಗಿ, ಕಷ್ಟಗಳಿಗೆ ನೆರವಾಗಿ, ನಿರಂತರ ಸೇವೆಯನ್ನು ಮಾಡಿ, ಅವರ ಸಂತೃಪ್ತಿಯನ್ನೇ ತಮ್ಮ ತೃಪ್ತಿಯಾಗಿ ಕಂಡು ಬಾಳಿದರೆ ಜ್ಞಾನ ಸಂಪಾದನೆಗೆ ಹೊಸಮೆರುಗು ಮತ್ತು ಸಮೃದ್ಧಿ ಲಭಿಸುವುದು. ಸಮೃದ್ಧಿಯೇ ಇಲ್ಲಿ ಮುಖ್ಯ. ಜ್ಞಾನವನ್ನು ಯಾರಿಗೂ ಕರಗತ ಮಾಡಬಹುದು. ಆದರೆ ಅದರಿಂದ ಅನಿವಾರ್ಯವಾಗಿ ಸಿಗಬೇಕಾದ ಸಮೃದ್ಧಿ ಕೈವಶಪಡಿಸುವುದು ಸ್ವಲ್ಪ ಪ್ರಯಾಸದಾಯಕ.

ಮತ್ತೊಂದು ಮುಖ್ಯಾಂಶವೇನೆಂದರೆ ಪಠ್ಯಪುಸ್ತಕಗಳು. ಕಲಿಯುವ ಗ್ರಂಥಗಳೆಲ್ಲ ಶ್ರೇಷ್ಠ ವಿದ್ವಾಂಸರಿಂದ ರಚಿತವಾಗಿರುತ್ತದೆ. ಸಂಪನ್ನ ಜ್ಞಾನ ಭಂಡಾರವೆಂಬುದಕ್ಕಿಂತ ಮಿಗಿಲಾಗಿ ಪರೋಕ್ಷ ಬರಕತ್ತು (ಸಮೃದ್ದಿ) ಅದಕ್ಕಿರುತ್ತದೆ. ವಿದ್ಯಾರ್ಥಿ ಅದನ್ನೂ ಕೂಡ ಒಳಗು ಮಾಡಬೇಕಾಗುತ್ತದೆ. ಆದ್ದರಿಂದ ಗ್ರಂಥ ಪಾರಾಯಣ ಗೌರವಪೂರ್ವಕವಾಗಿರಬೇಕು. ಜತನದಿಂದ ಅದನ್ನು ಕಾಪಿಟ್ಟುಕೊಳ್ಳಬೇಕು. ಆಧುನಿಕ ವಿದ್ಯಾ ಕೇಂದ್ರಗಳ ಪಠ್ಯಕ್ರಮ, ವ್ಯಾಸಂಗ ವಿಧಾನ ಆಮೂಲಾಗ್ರ ಬದಲಾಗಿದ್ದರೂ ಇಸ್ಲಾಮೀ ಪರಂಪರೆಯ ಕಲಿಕಾ ವಿಧಾನ, ಗ್ರಂಥದ ಶೈಲಿ ಅಭಿಜಾತ ಅಥವಾ ಕ್ಲಾಸಿಕಲ್‌ ಆಗಿದೆ. ಅದಕ್ಕೊಂದು ಸೌಂದರ್ಯವಿದೆ; ಒಂದೇ ನೋಟಕ್ಕೆ ಅಷ್ಟೇನೂ ಸಮರ್ಪಕವೆಂದು ನಮಗೆ ತೋರದಿದ್ದರೂ ಕೂಡ. ಖುರಾನ್‌ ಮತ್ತು ಹದೀಸ್‌ ಒಳಗೊಂಡಂತೆ ಇಸ್ಲಾಮೀ ವೈಜ್ಞಾನಿಕ ಕೃತಿಗಳು ಕ್ಲಾಸಿಕಲ್‌ ಶೈಲಿಯಲ್ಲೇ ಇರುವುದರಿಂದ, ಕ್ಲಾಸಿಕಲ್‌ ವಿಧಾನದಲ್ಲೇ ಇಸ್ಲಾಮೀ ವ್ಯಾಸಂಗ ಜರುಗಬೇಕಿದೆ.

ಸಮಕಾಲೀನ ಜಗತ್ತಿನಲ್ಲಿ ಸಮಾನವಾದ ಇಂಥ ಪರಂಪರೆಯೊಂದು ಕಾಣುವುದು ಅಸಾಧ್ಯ. ಕಲಿಸುವ ಗುರುವರ್ಯರನ್ನೇ ಕೊಚ್ಚಿ ಹಾಕುವ, ಅಪಮಾನಿಸುವ, ವಾರೆ ನೋಟದಿಂದ ನೋಡುವ, ಕೆಣಕುವ, ಹೊಡೆದು ಬಡಿಯುವ ವಿದ್ಯಾರ್ಥಿ ಪಡೆಯೊಂದು ಸೃಷ್ಟಿಯಾಗುತ್ತಿರುವಾಗ, ಬಹಳ ಸಹಜವಾಗಿ ಶಿಸ್ತುಬದ್ಧ ಗುರುಮುಖಿಗಳಾದ ವಿದ್ಯಾರ್ಥಿ ತಲೆಮಾರೊಂದನ್ನು ನಿರ್ಮಿಸುವುದು ಸಣ್ಣ ಕೆಲಸವಲ್ಲ. ಇಂಥ ಸಂಕೀರ್ಣ ವಿಶಿಷ್ಠ ಸಂಪ್ರದಾಯವೊಂದನ್ನು ಜತನದಿಂದ ಕಾಪಿಟ್ಟುಕೊಳ್ಳುವ ಜವಾಬ್ದಾರಿ ಮಹತ್ತರವಾದುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸುಂದರ ಲೋಕದ ಕನಸು ಕಾಣುವನು. ಉತ್ತಮ ಗುಣನಡತೆ ಉಳ್ಳವನಾಗಬೇಕೆಂದು ಬಯಸುತ್ತಾನೆ. ಆದರೆ ತಪ್ಪುದಾರಿ ಹಿಡಿದು ವಾಸ್ತವ ವಿರುದ್ಧ ಮುಖಿಯಾಗುವನು. ತನ್ನಿಚ್ಛೆಯಂತೆ ನಡೆದು ಗುರಿ ಸಾಧಿಸಬೇಕೆನ್ನುವ ಹಠ ಹಿಡಿಯುತ್ತಾನೆ. ಇಸ್ಲಾಮೀ ಪರಂಪರೆಯಲ್ಲಿ ದೇಹೇಚ್ಛೆಗಳಿಗೆ ಬೆಲೆಯಿಲ್ಲ. ಅಲ್ಲಾಹನ ಇಚ್ಛೆಗೆ ಮಾತ್ರ ಗಣನೆ. ಅದರಂತೆ ನಡೆದುಕೊಳ್ಳುವವನು ಯಶಸ್ವಿಯಾಗುತ್ತಾನೆ. ಅಲ್ಲದವನು ವಿನಾಶಕೂಪಕ್ಕೆ ಸೇರಿ ಹೊರಳಾಡುವನು, ಅಷ್ಟೆ.

ಇನ್ನು ಸಂಕ್ಷಿಪ್ತವಾಗಿ ಇಸ್ಲಾಮೀ ಉನ್ನತ ಮಟ್ಟದ ವ್ಯಾಸಂಗದಲ್ಲಿ ಬರುವ ಜ್ಞಾನಶಾಸ್ತ್ರಗಳನ್ನು ಅವಲೋಕಿಸೋಣ. ಈಗಾಗಲೇ ಹೇಳಿದಂತೆ ಖುರಾನ್‌, ಹದೀಸ್‌ ಮತ್ತು ಅದರ ವ್ಯಾಖ್ಯಾನವಾಗಿ ರಚಿತಗೊಂಡ ಎಲ್ಲ ಗ್ರಂಥಗಳ ಭಾಷೆ ಕ್ಲಾಸಿಕಲ್‌ ಅರಬಿ. ಆದ್ದರಿಂದ, ಕಲಿಕೆ ಆರಂಭಿಸುವುದು ಕ್ಲಾಸಿಕಲ್‌ ಅರಬಿ ಭಾಷೆಯ ಅಧ್ಯಯನದಿಂದಲೇ. ಈ ನಿಟ್ಟಿನಲ್ಲಿ ಅರಬಿ ವ್ಯಾಕರಣ ಮತ್ತು ಸಾಹಿತ್ಯ ಸಂಬಂಧಿತ ಕೃತಿಗಳ ಪರಿಣತಿ ಹೊಂದಬೇಕಾಗುವುದು. ಭಾಷಾವಿಜ್ಞಾನದ ಅಂಗವಾದ ಪದೋತ್ಪತ್ತಿಶಾಸ್ತ್ರ, ವಾಕ್ಯ ಶಾಸ್ತ್ರಗಳಲ್ಲಿ ಹಲವು ಗ್ರಂಥಗಳ ಅಧ್ಯಯನ ನಡೆಯುವುದು. ಸಾಹಿತ್ಯಾಧ್ಯಯನದಲ್ಲಿ ಅರ್ಥಶಾಸ್ತ್ರ, ವಿವರಣಾಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರ ಎಂಬೀ ಮೂರು ಉಪಶಾಖೆಗಳು ಬರುತ್ತವೆ. ಇಸ್ಲಾಮೀ ಜ್ಞಾನಶಾಸ್ತ್ರಗಳನ್ನು ರೂಪುಗೊಳಿಸಲು ಸುಸಮಂಜಸವಾದ ಆಳಚಿಂತನೆ ಅತ್ಯಗತ್ಯ. ಖುರಾನ್‌, ಹದೀಸ್‌ ಗಳಿಂದ ನಂಬಿಕೆ ಮತ್ತು ಕರ್ಮಗಳಿಗೆ ಸಂಬಂಧಿಸಿದ ತತ್ವಗಳ ಸಂಶೋಧನೆ ಮಾಡಲು ಆಳವಾದ ಚಿಂತನೆ ಮಂಥನದ ಅನಿವಾರ್ಯತೆಯಿದೆ. ಪ್ರಸ್ತುತ ಚಿಂತನೆಯನ್ನು ಸಮರ್ಪಕಗೊಳಿಸಲು ಹಾಗೂ ಸಂಬದ್ಧಗೊಳಿಸಲು ತರ್ಕಶಾಸ್ತ್ರ ಯಾ ನ್ಯಾಯಶಾಸ್ತ್ರದ ಹಲವು ಉದ್ಗ್ರಂಥಗಳನ್ನು ಅಧ್ಯಯನಕ್ಕೊಳಪಡಿಸಲಾಗುತ್ತದೆ.

ಬದುಕಿನ ಎರಡು ಪ್ರಮುಖ ಮಗ್ಗುಲುಗಳಾಗಿವೆ ನಂಬಿಕೆ ಮತ್ತು ಕರ್ಮ. ಇವೆರಡನ್ನು ರೂಪಿಸಲು ವಿಶ್ವಾಸಶಾಸ್ತ್ರ ಮತ್ತು ಕರ್ಮಶಾಸ್ತ್ರಗಳ ಗ್ರಂಥಗಳನ್ನು ಸೂಕ್ಷ್ಮ ಮತ್ತು ವಿಮರ್ಶಾಪ್ರಜ್ಞೆಯೊಂದಿಗೆ ಓದಲಾಗುತ್ತದೆ. ನಂಬಿಕೆ ಎಂಬುದು ವಿಚಾರಧಾರೆಯೊಂದರ ಅತೀಂದ್ರಿಯ ಸಂರಚನೆಯ ಮೂಲ ಸ್ವರೂಪವನ್ನು ನಿರ್ಣಯಿಸುವುದರಿಂದ ಅದನ್ನು ಸುಭದ್ರಗೊಳಿಸುವುದು ಬಹಳ ಮುಖ್ಯ. ವಿಮರ್ಶೆ ಟೇಕೆ ಗಳು ಪ್ರಾಥಮಿಕವಾಗಿ ನಂಬಿಕೆಯ ವಿಚಾರವಾಗಿಯೇ ಬರುತ್ತದೆ. ಆದ್ದರಿಂದ ಮೂಲಭೂತ ನಂಬಿಕೆಗಳನ್ನು ಸಾರ್ವತ್ರಿಕ ಅಂಗೀಕಾರ ಹೊಂದಿದ ಪ್ರಮಾಣಗಳ ಮೂಲಕ ಸಾಬೀತು ಪಡಿಸುವುದು ಮತ್ತು ಟೇಕೆಗಳಿಗೆ ತೃಪ್ತಿದಾಯಕ ಪರಿಹಾರ ನೀಡುವುದು ವಿದ್ವಾಂಸರ ಕರ್ತವ್ಯವಾಗಿದೆ. ಈ ಉದ್ದೇಶದೊಂದಿಗೆ ರೂಪಿಸಲಾದ ಜ್ಞಾನ ಶಾಸ್ತ್ರವಾಗಿದೆ ಇಲ್ಮುಲ್ ಕಲಾಂ. ಇದರ ಕಲಿಕೆಗೆ ಪ್ರವೇಶಿಕೆಯಾಗಿ ಕ್ಲಾಸಿಕಲ್ ಫಿಲಾಸಫಿಯ ಮೂಲಭೂತ ಪರಿಭಾಷೆಗಳ ಪರಿಚಯ ಮಾಡಿ ಕೊಡುವ ಇಲ್ಮುಲ್ ಹಿಕ್ಮದ ಪಠ್ಯ ಪುಸ್ತಕ ಮುಖ್ಯವೆನಿಸುತ್ತದೆ. ಅಗಾಧ ಆಳ ಅರ್ಥಗಳನ್ನು ಅಂತರ್ಗತಗೊಳಿಸಿದ ಖುರಾನ್‌ನ ಒಳ ಹರಿವುಗಳನ್ನು ಹೊರತರುವ ವ್ಯಾಖ್ಯಾನ ಗ್ರಂಥಗಳು, ಹದೀಸ್‌ ಮೂಲ ಪಠ್ಯಗಳು, ಹದೀಸ್‌ ಅಧ್ಯಯನದಲ್ಲಿ ಅರ್ಥೈಸಬೇಕಾದ ಮೂಲಭೂತ ತತ್ವಗಳು ಎಂಬಿತ್ಯಾದಿ ವಿಷಯಗಳು ಅಧ್ಯಯನಕ್ಕೆ ಒಳಪಡುತ್ತವೆ. ಜತೆಗೆ, ಮುಸ್ಲಿಮರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಖಿಬ್ಲಾ ನಿರ್ಣಯದ ಅಗತ್ಯಕ್ಕೆ ಖಗೋಳಶಾಸ್ತ್ರ ಹಾಗೂ ಗಣಿತಶಾಸ್ತ್ರದ ಗ್ರಂಥಗಳನ್ನು ಕೂಡ ಕಲಿಯಬೇಕಾಗುತ್ತದೆ. ಒಟ್ಟಾರೆ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬೌದ್ಧಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಅಭಿವೃದ್ಧಿಗೊಳಿಸುವಂಥ ವ್ಯವಸ್ಥಿತ ಪಠ್ಯಕ್ರಮವನ್ನು ಇಸ್ಲಾಮೀ ಜ್ಞಾನ ಪರಂಪರೆ ಹೊಂದಿದೆಯೆಂದು ನಿಚ್ಚಳವಾಗುತ್ತದೆ.

Leave a Comment

Your email address will not be published. Required fields are marked *

Scroll to Top