ಇಮಾಂ ನವವಿ (ರ): ವಿದ್ವತ್ ಲೋಕದ ವಿಸ್ಮಯ
ವಿಶ್ವ ಪ್ರಸಿದ್ಧವಾದ ಡಮಸ್ಕಸ್ ಎಂಬುವುದು ಸಾವಿರಾರು ವಿದ್ವಾಂಸರಿಗೂ,ಸೂಫಿವರ್ಯರಿಗೂ
ಹಾಗೂ ನೇತಾರರಿಗೂ ಜನ್ಮವನ್ನು ಕೊಟ್ಟಂತಹ ನಾಡಾಗಿದೆ. ಅಲ್ಲಿಇರುವಂತಹ ಮಸೀದಿಗಳು ಸರ್ವ ವಿದ್ಯೆಗಳನ್ನು ಕಲಿಸಿಕೊಡುವಂತಹ ಕೇಂದ್ರವಾಗಿತ್ತು. ಆ ಕಾಲದಲ್ಲಾಗಿದೆ ಇಮಾಮ್ ನವವೀ
(ರ.ಅ)ಎಂಬ ಹೆಸರಿನಲ್ಲಿ ಅರಿಯಲ್ಪಡುವಂತಹ ವಿಶ್ವ ಪ್ರಸಿದ್ಧರಾದ ಯಹ್ಯಾ ರವರು ಡಮಸ್ಕಸಿಗೆ ಬಂದು ವಿದ್ಯೆಯನ್ನು ಪ್ರಾರಂಭಿಸುವುದು.
ದಮಾಸ್ಕಸಿನಲ್ಲಿರುವಂತಹ ಒಂದು ಕುಗ್ರಾಮವಾದ ನವ ಎಂಬಲ್ಲಿ ವ್ಯಾಪಾರಸ್ಥನಾಗಿದ್ದ ಶರಫಬ್ನು
ಮುಝುರಿನ್ ಎಂಬವರು ಧರ್ಮಭಕ್ತೆಯೂ, ಸದ್ಗುಣವಂತೆಯೂ ಆಗಿದ್ದ ಮಹಿಳೆಯನ್ನು
ವಿವಾಹವಾಗುವರು. ಆ ದಂಪತಿಗಳಿಗೆ ಹಿಜ್ರ 631 ಮೊಹರಂ ತಿಂಗಳಿನಲ್ಲಿ ಒಂದು ಗಂಡು ಮಗು
ಜನಿಸುತ್ತದೆ. ಆ ಮಗುವಿಗೆ ಯಹ್ಯಾ ಎಂದು ಹೆಸರಿಡಲಾಯಿತು. ಯಹ್ಯಾ ಮುಂದೆ ಪ್ರಾಥಮಿಕ
ಶಿಕ್ಷಣವನ್ನು ತನ್ನ ಊರಿನಲ್ಲೇ ಕಲಿತರು. ಕುರಾನ್ ಪಾರಾಯಣವನ್ನು ಕೂಡ ಆ ಸಮಯದಲ್ಲಿ
ಕಲಿತರು. ಆದರೆ ನವದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಲು ಉತ್ತಮ ಶಾಲೆಗಳು ಹಾಗೂ
ವಿದ್ವಾಂಸರ ಕೊರತೆ ಇದ್ದ ಕಾರಣದಿಂದಾಗಿ ಅವರ ಉನ್ನತ ಶಿಕ್ಷಣದ ಕುರಿತಾಗಿ ಅವರ ತಂದೆ
ತಾಯಿಯು ಯೋಚಿಸಲಿಲ್ಲ.
ತನ್ನ ವ್ಯಾಪಾರದಲ್ಲಿ ಸಹಾಯಕನಾಗಿ ಮಗನನ್ನು ನಿಲ್ಲಿಸಬೇಕೆಂದು ಉದ್ದೇಶಿಸಿದ ತಂದೆ
ಶರಫರವರು ಯಹ್ಯಾ ರನ್ನು ಅಂಗಡಿಯಲ್ಲಿ ನಿಲ್ಲಿಸಿ ಸಲಹೆ ನಿರ್ದೇಶನಗಳನ್ನು ಕೊಟ್ಟರು. ಆದರೆ
ಯಹ್ಯಾರಿಗೆ ವ್ಯಾಪಾರದಲ್ಲಿ ಆಸಕ್ತಿಯೇ ಇರಲಿಲ್ಲ. ನಿತ್ಯವೂ ಪರಿಶುದ್ಧ ಕುರಾನ್ ಪಾರಾಯಣದಲ್ಲಿ
ಉತ್ಸಾಹ ಭರಿತರಾಗಿದ್ದ ಅವರಲ್ಲಿ ಸಾಮಾನುಗಳನ್ನು ವಿಲೇವಾರಿ ಮಾಡುವಂತ ಸಮಾಯವಿರಲಿಲ್ಲ .
ಶಿಸ್ತು ,ವಿನಯ ,ಸೌಮ್ಯತೆ ಮೊದಲಾದ ಸದ್ಗುಣಗಳು ಅವರಲ್ಲಿ ಪ್ರಕಟವಾಗಿತ್ತು.
ಕಲಿಕೆ:
ಇಮಾಮ್ ನವವೀ (ರ.ಅ) ರವರು ಕಲಿಯುವ ಸಮಯದಲ್ಲಿ ಸಮಯಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಅವರ ಬಗ್ಗೆ ‘ಯಾಸೀನ್ ಬ್ನ್ ಯೂಸುಫುಲ್ ಮರಾಕಷಿ’ ರವರು ಹೇಳುತ್ತಾರೆ
“ಗೆಳೆಯರೆಲ್ಲ ಆಟವಾಡಲೆಂದು ಒತ್ತಾಯಿಸುವಾಗ ಗೆಳೆಯರಿಂದ ಓಡಿಹೋಗಿ ಕುರ್ಆನ್ ನ್ನು ತೆಗೆದು ಓದುತ್ತಿದ್ದರು”.
“ಹುಜ್ಜತುಲ್ ಇಸ್ಲಾಂ” ಇಮಾಮ್ ಗಝಾಲಿ ರವರ ‘ವಸೀತ್’ ಎಂಬ ಗ್ರಂಥದಿಂದ ಒಂದು ವಿಷಯವನ್ನು ಇಮಾಂ ನವವೀ (ರ.ಅ) ರವರು ತೆಗೆದು ಉಲ್ಲೇಖಿಸಿದಾಗ ಆ ಊರಿನಲ್ಲಿರುವ ಇತರೆ ಉಲಮಗಳು ವಸೀತ್ ಎಂಬ ಗ್ರಂಥದಲ್ಲಿ ಹಾಗಿದೆಯೇ ಎಂಬ ತಿದ್ದುಪಡಿ ಮನೋಭಾವದೊಂದಿಗೆ ಕೇಳಿದಾಗ, ಇಮಾಮ್ ನವವಿ ರವರು ನೀಡಿದ ಉತ್ತರವೆಂದರೆ “ನೀವು ನನ್ನೊಂದಿಗೆ ಈ ವಿಷಯದ ಕುರಿತು ತರ್ಕಿಸುವುದೋ ನಾನು ಈ ಗ್ರಂಥವನ್ನು 400 ಬಾರಿ ಪೂರ್ತಿಯಾಗಿ ಓದಿದ ನಂತರವೇ ಅದರ ಕುರಿತು ಉದ್ದರಿಸಿರುವೆನು” ಎಂದು .
ಪ್ರಮುಖವಾದ ಕೃತಿಗಳು:
ಫಿಕ್ಹ್ ,ಹದೀಸ್, ತಸವುಫ್ ಮೊದಲಾದ ಜ್ಞಾನದ ವಿವಿಧ ಶಾಖೆಗಳಲ್ಲಿ ಇಮಾಂ ನವವೀ(ರ.ಅ)
ರವರು ಪ್ರಸಿದ್ಧವಾದ ಅಸಂಖ್ಯಾತ ಗ್ರಂಥಗಳನ್ನು ರಚಿಸಿದ್ದಾರೆ.
ವಿಶ್ವ ವಿಖ್ಯಾತವಾದ ಸ್ವಹೀಹ್ ಮುಸ್ಲಿಂನ ವ್ಯಾಖ್ಯಾನವಾದ ‘ಶರಹ್ ಮುಸ್ಲಿಂ’ ನ್ನು ತೆಗೆದು ನೋಡಿದರೆ
ಇಮಾಮ್ ನವವಿ (ರ.ಅ) ರವರ ಅರಿವಿನ ಆಳ ಎಲ್ಲಿಯವರೆಗೆ ಇದೆ ಎಂದು ತಿಳಿಯಬಹುದು.
ಡಮಸ್ಕಸಿನ ಒಂದು ಮಸೀದಿಯಲ್ಲಾಗಿದೆ ‘ಸ್ವಹೀಹ್ ಮುಸ್ಲಿಂ’ ಎಂಬ ಗ್ರಂಥವನ್ನು ಇಮಾಮ್ ನವವೀ (ರ.ಅ) ರವರು ಅಧ್ಯಯನ ಮಾಡುವುದು. ಅವರ ‘ಮಿನ್ಹಾಜ್’ಎಂಬ ಗ್ರಂಥವು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದು , ಕರ್ಮ ಶಾಸ್ತ್ರ ಗ್ರಂಥಗಳ ತಾಯಿ ಎಂದು ಪ್ರಖ್ಯಾತವಾಗಿದೆ.
ಹೀಗೆ ಹಲವಾರು ಗ್ರಂಥಗಳನ್ನು ಇಮಾಮ್ ನವವಿ ರವರು
ರಚಿಸಿದ್ದಾರೆ. ಅದರಲ್ಲಿ ಕೆಲವು ಗ್ರಂಥಗಳು ಕಳೆದು ಹೋಗಿವೆ ಎಂದು ಗ್ರಂಥ ಪರಿಶೋಧಕರು
ತಿಳಿಸಿದ್ದಾರೆ.
ಇಮಾಮ್ ನವವಿ ರವರು ತನ್ನ ಆಳವಾದ ಜ್ಞಾನವನ್ನು ನಿರುಪಯುಕ್ತ ವಿಷಯಗಳಿಗೆ
ಬಳಸಲಿಲ್ಲ. ಜನಪ್ರಿಯತೆ ಹಾಗೂ ಪ್ರಶಂಸೆಯನ್ನು ಬಯಸದೆ ಸತ್ಯವನ್ನು ಜನರಲ್ಲಿ ಬಿಡಿಬಿಡಿಯಾಗಿ ಬಿಚ್ಚಿಡುತ್ತಿದ್ದರು. ಆಡಳಿತಾಧಿಕಾರಿಗಳ ದುಷ್ಕೃತ್ಯವನ್ನು ಕಂಡರೆ ಅವರ ಮುಂದೆಯೇ ವಿರೋಧಿಸುತ್ತಿದ್ದರು. ಒಬ್ಬ ಆಡಳಿತ ಅಧಿಕಾರಿಯು ಸಮಾಜದಲ್ಲಿ ಯಾವ ರೀತಿಯಲ್ಲಿ ನ್ಯಾಯದ ಸ್ಥಾಪನೆಯನ್ನು ಮಾಡಬೇಕು ಎಂಬುದರ ಕುರಿತಾಗಿ ಅವರು ಧರ್ಮ ವೀಕ್ಷಣೆಯೊಂದಿಗೆ ವೀರಾವೇಶದೊಂದಿಗೆ ಜನರಿಗೆ ಭೋದಿಸುತ್ತಿದ್ದರು. ಅಲ್ಲದೆ ಇಮಾಮರು ಅವರ ಒಂದೊಂದು ಸಮಯವನ್ನು ಅತ್ಯಂತ ಜಾಗೃತೆಯೊಂದಿಗೆ ಬಳಸುತ್ತಿದ್ದರು. ಸದಾ ಶುಚಿಯಾದ ವಸ್ತ್ರವನ್ನು ಧರಿಸುತ್ತಿದ್ದರು. ನಿತ್ಯ ಲಘು ಆಹಾರವನ್ನೇ ಸೇವಿಸುತ್ತಿದ್ದರು. ಅದು ಕೂಡ ದಿನದಲ್ಲಿ ಒಂದು ಬಾರಿ ಮಾತ್ರ.
ಇಮಾಮ್ ನವವೀ ರವರು ಸುಪ್ರಸಿದ್ಧರಾದ ಇಮಾಮ್ ಸುಬುಕಿ ರವರ
ಸಮಕಾಲೀನರಾಗಿದ್ದರು. ನವವೀರನ್ನು ಕಾಣಬೇಕು ಹಾಗೂ ಪರಿಚಯ ಮಾಡಿಸಿಕೊಳ್ಳಬೇಕೆಂಬುವುದು
ಬಾಲಕನಾದ ಸುಬುಕಿರವರ ಉದ್ದೇಶವಾಗಿತ್ತು. ಹಾಗೆಯೇ ಅವರು ನವವೀರನ್ನು ಕಾಣಲೆಂದು ಯಾತ್ರೆ
ಹೊರಡುವರು. ಆದರೆ ಅಲ್ಲಿ ತಲುಪುವ ಮೊದಲಳೇ ನವವೀ (ರ) ಅಲ್ಲಾಹನೆಡೆಗೆ ಯಾತ್ರೆ
ಹೊರಟಾಗಿತ್ತು. ನಂತರ ಸುಬ್ಬುಕಿ ರವರು ಇಮಾಮ್ ನವವಿ ರವರು ಕುಳಿತಂತಹ ಹಾಸನ್ನು ಚುಂಬಿಸಿ
ನಿಷ್ಕಳಂಕತೆಯೊಂದಿಗೆ ಇಮಾಮರ ಬಗ್ಗೆ ಪ್ರೇಮಗೀತೆಯನ್ನು ಹಾಡುವರು ಹಾಗೂ ಸುಬ್ಬುಕೀ ರವರು
ನಿತ್ಯ ಇಮಾಮರು ಕುಳಿತ ಸ್ಥಳದಲ್ಲಿ ತಹಜ್ಜುದು ನಮಾಜ್ ಮಾಡಿ ನಂತರ ಆ ಸ್ಥಳವನ್ನು ಚುಂಬಿಸಿ
ನವವಿರವರ ಪ್ರೇಮಗೀತೆಯನ್ನು ಹಾಡುವುದು ರೂಢಿಯಾಗಿತ್ತು.
ಅಷ್ಟೊಂದು ಉನ್ನತ ವ್ಯಕ್ತಿಯಾದ ಸುಬುಕಿ ಇಮಾಮರು ಈ ರೀತಿಯಾಗಿದೆ ನವವಿ
ಇಮಾಮರನ್ನು ಗೌರವಿಸಿದ್ದಾದರೆ ಅವರು ಸಾಮಾನ್ಯ ಜ್ಞಾನ ಉಳ್ಳವರಲ್ಲ, ಅರಿವಿನ ಸಮುದ್ರವೇ
ಆಗಿದ್ದಾರೆ ಎಂದು ಅರ್ಥೈಸಬಹುದು. ಆ ಕಾರಣದಿಂದಾಗಿದೆ ಇಮಾಮರು ಇಡೀ ವಿಶ್ವದಲ್ಲೇ
ಎರಡನೆಯ ಶಾಫಿ ಎಂದು ಪ್ರಸಿದ್ಧಿ ಪಡೆದು ಇಂದಿಗೂ ಜನ ಮನಸ್ಸುಗಳಲ್ಲಿ ಚಿರಪರಿಚಿತರಾಗಿರುವುದು.
ಪವಾಡಗಳು: ಇಮಾಮ್ ನವವೀ(ರ.ಅ) ರವರ ಜೀವನ ಕಾಲದಲ್ಲಿ ಹಲವಾರು ರೀತಿಯ ಪವಾಡಗಳು ಸಂಭವಿಸಿದ್ದು, ಚರಿತ್ರೆ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಇಮಾಮರ ಗ್ರಂಥ ರಚನೆಗಳೇ ಒಂದು
ಮಹಾ ಪವಾಡವಾಗಿದೆ. ಅವರು ರಚಿಸಿದಂತಹ ಎಲ್ಲಾ ಗ್ರಂಥಗಳ ಪುಟಗಳನ್ನು ಹಾಗೂ ಅವರ
ಆಯುಷ್ಯವನ್ನು ಪರಿಶೋಧಿಸಿ ನೋಡಿದರೆ ಒಂದೊಂದು ದಿವಸದಲ್ಲಿ ಸರಾಸರಿ 16 ಪುಟಗಳಿಗೆ ತಕ್ಕಂತೆ ರಚನೆ ಮಾಡಿದ್ದಾಗಿ ಕಾಣುತ್ತದೆ. ಬಾಲ್ಯಕಾಲವನ್ನು ಕೂಡ ಪರಿಗಣಿಸಿಯಾಗಿದೆ ಈ ಲೆಕ್ಕಾಚಾರವನ್ನು ಮಾಡಿರುವುದು. ಅವರ ಕಾಲದ ಕೆಲವು ಸಜ್ಜನ ವ್ಯಕ್ತಿಗಳಿಗೆ ಇಮಾಮ್ನ ವವೀರವರ ಕನಸುಗಳು ಬೀಳುತ್ತಿದ್ದವು.
ಹೀಗಿರುವಾಗ ಒಂದು ದಿವಸ ‘ಅಬುಲ್ ಕಾಸಿಮಿಲ್ ಮಿರ್ಝಿ’ ಎಂಬ ವ್ಯಕ್ತಿಗೆ ಇಮಾಂ ನವವೀ (ರ.ಅ)
ರವರ ಕನಸು ಬಿತ್ತು. ಮರು ದಿವಸ ಅವರು ನವವೀ ಇಮಾಂ ರ ದರ್ಸಿಗೆ ಹೋಗುವರು. ಇಮಾಮ್
ನವವೀ ರವರು ಮಸೀದಿಯ ಒಳಗಡೆ ಕುಳಿತಿದ್ದರು. ‘ಅಬುಲ್ ಕಾಸಿಮಿಲ್ ಮಿರ್ಝಿ’ ರವರು
ಬಂದದ್ದನ್ನು ಕಂಡಂತಹ ನವವೀ ಇಮಾಮ್ ರು ನೇರವಾಗಿ ಅವರ ಬಳಿ ಹೋಗಿ “ನಿನ್ನೆ ರಾತ್ರಿ ನೀವು ನನ್ನನ್ನು ಕನಸಿನಲ್ಲಿ ಕಂಡ ವಿಚಾರವನ್ನು ಯಾರೊಂದಿಗೂ ಹೇಳದಿರಿ” ಎಂದು ಹೇಳುವರು.
ನವವೀ ಇಮಾಮ್ ರವರು ಬರೆಯುತ್ತಿರುವ ಸಮಯದಲ್ಲಿ ದೀಪ ಆರಿ ಹೋದರೆ ನವವೀ
ಇಮಾಮಾರ ಕೈ ಬೆರಳುಗಳು ಪ್ರಕಾಶಿಸುತ್ತಿದ್ದವು. ಆ ಬೆಳಕಿನ ಪ್ರಕಾಶದಿಂದ ಇಮಾಮ್ ನವವೀ
ರವರು ಬರವಣಿಗೆಯನ್ನು ಪೂರ್ತಿಗೊಳಿಸುತ್ತಿದ್ದರು.
ಮರಣ:
ಇಮಾಮ್ ನವವೀ (ರ.ಅ) ರವರು ಹಿಜ್ರ 676ರಲ್ಲಿ ತನ್ನ ಗ್ರಂಥಗಳೊಂದಿಗೆ ಊರಿಗೆ ಹೊರಡುವರು.
ಯಾತ್ರೆ ಹೊರಡುವ ಮುಂಚೆ ಅಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವಂತಹ ಮಹಾತ್ಮರ ಸನ್ನಿಧಿಯ ಬಳಿ ಹೋಗಿ ಕುರ್ಆನ್ ಓದಿ, ನಿಷ್ಕಳಂಕವಾಗಿ ಪ್ರಾರ್ಥಿಸಿದರು. ದಾರಿ ಮಧ್ಯೆಯಲ್ಲಿ ಬೈತುಲ್ ಮುಖದ್ದಸ್ಹಾ ಗೂ ಇತರೆ ಪುಣ್ಯ ಸ್ಥಳಗಳನ್ನು ಸಂದರ್ಶಿಸಿದರು. ಈಜಿಪ್ಟ್ ನಿಂದ ಡಮಸ್ಕಸ್ ಗಡಿಯವರೆಗೆ ದೊಡ್ಡ ಜನಸ್ತೋಮವು ಇಮಾಮ್ ರನ್ನು ಬೀಲಕೊಡುಗೆ ಮಾಡಲು ಹಿಂಬಾಲಿಸಿತ್ತು. ಇಮಾಮ್ ರವರ ಯಾತ್ರೆಯು ಅಲ್ಲಿನ ದುಃಖಕ್ಕೆ ದಾಖಲೆಯಾಗಿ ಬಿಟ್ಟಿತು. ಊರಿಗೆ ತಲುಪಿದ ಇಮಾಂ ನವವೀ ರವರು ಮಾತಾ ಪಿತಾರೊಂದಿಗೆ ಜೀವನ ಮುಂದುವರಿಸೋಣ ಎಂದು ತೀರ್ಮಾನಿಸಿದರು. ಆದರೆ ವಿಧಿಯ ಬರಹವು ಬೇರೆಯೇ ಆಗಿತ್ತು. ನಂತರ ಅವರಿಗೆ ಒಂದು ರೋಗ ಬಾಧಿಸಿತು. ಹಿ 676
ರಜಬ್ 24 ಬುಧವಾರ ರಾತ್ರಿ 46ನೆಯ ವಯಸ್ಸಿನಲ್ಲಿ ಮಾತಾಪಿತರ ಸಾನಿಧ್ಯದಲ್ಲಿ ಆ ಜ್ಞಾನದೀಪವು
ಆರಿತು. ನವದಲ್ಲಾಗಿದೆ ಇಮಾಮ್ ನವವೀ ರವರ ಸಮಾಧಿಯಿರುವುದು ಬ. ಅಲ್ಲಾಹು ಅವರೊಂದಿಗೆ ನಮ್ಮನ್ನು ಪರಲೋಕದಲ್ಲಿ ಒಂದುಗೂಡಿಸಲಿ. ಆಮೀನ್.
ಮುಹಮ್ಮದ್ ನೌಫಲ್
(ಅಲ್ ಇಹ್ಸಾನ್ ದಅವಾ ಕಾಲೇಜು. ಮೂಳೂರು)